ಬಿರ್ಲಾ, ಘನಶ್ಯಾಮದಾಸ್
1894-1983. ಭಾರತದ ಒಬ್ಬ ದೊಡ್ಡ ಕೈಗಾರಿಕೋದ್ಯಮಿ, ವ್ಯವಹಾರವಿದ, ರಾಷ್ಟ್ರಾಭಿಮಾನಿ, ಮಹಾತ್ಮಗಾಂಧಿಯವರ ಅನುಯಾಯಿ ಮತ್ತು ದಾನಿ. 1894 ಏಪ್ರಿಲ್ 10ರಂದು ಈಗಿನ ರಾಜಸ್ಥಾನದ ಪಲಾನಿಯಲ್ಲಿ ಜನನ. ಹನ್ನೆರಡನೆಯ ವಯಸ್ಸಿನಲ್ಲಿ ಮುಂಬಯಿಯಲ್ಲಿ ತಮ್ಮ ತಂದೆಯವರಿಗೆ ವ್ಯಾಪಾರದಲ್ಲಿ ನೆರವು ನೀಡತೊಡಗಿದ ಬಿರ್ಲಾ ಹದಿನಾರನೆಯ ವಯಸ್ಸಿನಲ್ಲಿ ಸ್ವತಂತ್ರವಾಗಿ ತಮ್ಮದೇ ಉದ್ಯಮ ಸ್ಥಾಪಿಸಿದರು. ನಲವತ್ತನೆಯ ವಯಸ್ಸಿನ ವೇಳೆಗೆ ಕೈಗಾರಿಕಾ ಸಾಮ್ರಾಜ್ಯವೊಂದರ ಅಧಿಪತಿಯಾಗಿದ್ದರು. ಭಾರತದ ಕೈಗಾರಿಕೆಯ ಬೆಳವಣಿಗೆಯೊಂದಿಗೆ ಬಿರ್ಲಾ ಜೀವನವೂ ಹೆಣೆದುಕೊಂಡಿದೆ. 

	ಕಲ್ಕತ್ತೆಯ ಕ್ಲೈವ್ ರಸ್ತೆಯ ವ್ಯವಹಾರ ಸಂಸ್ಥೆಗಳಿಗೆ ಅಲೆದಾಡುತ್ತ ದಲ್ಲಾಳಿ ವ್ಯವಹಾರವನ್ನಾರಂಭಿಸಿದ (1910) ಬಿರ್ಲಾ ಮುಂದಿನ ಇಪ್ಪತ್ತು ವರ್ಷಗಳಲ್ಲಿ ಭಾರತದ ವೈಸ್‍ರಾಯರ ಮೇಲೆ ವಿಶೇಷ ಪ್ರಭಾವ ಬೀರಬಲ್ಲ ವ್ಯಕ್ತಿಯಾಗಿದ್ದರು. ಮಹಾತ್ಮಗಾಂಧಿಯವರಿಗೆ ಅಚ್ಚು ಮೆಚ್ಚಿನವರಾಗಿದ್ದರು. ಬಿರ್ಲಾ ಆರಂಭಿಸಿದ ಹತ್ತಿ ಹಾಗೂ ಜವಳಿ ದಲ್ಲಾಳಿ ವ್ಯವಹಾರ ಕ್ರಮಕ್ರಮವಾಗಿ ಬೆಳೆಯಿತು. ತಮ್ಮ ಸೋದರರೊಂದಿಗೆ ಸ್ಥಾಪಿಸಿದ ಪಾಲುದಾರಿಕೆ ಸಂಸ್ಥೆ 1917ರಲ್ಲಿ ಸೆಣಬಿನ ರಫ್ತಿಗಾಗಿ ಲಂಡನ್ನಿನಲ್ಲಿ ಮೊದಲನೆಯ ಭಾರತೀಯ ಕಛೇರಿ ಸ್ಥಾಪಿಸಿತು. 1919ರಲ್ಲಿ ಕಲ್ಕತ್ತೆಯಲ್ಲಿ ಪ್ರಥಮ ಸೆಣಬು ಗಿರಣಿ ಆರಂಭವಾಯಿತು. ಭಾರತೀಯರ ಒಡೆತನದ ಪ್ರಥಮ ಸೆಣಬು ಗಿರಣಿ ಇದು. ಬಿರ್ಲಾ ಸಂಸ್ಥೆಯ ಪ್ರಥಮ ಹತ್ತಿ ಜವಳಿ ಗಿರಣಿ ದೆಹಲಿಯಲ್ಲಿ 1920ರಲ್ಲಿ ಕಾರ್ಯಾರಂಭ ಮಾಡಿತು. ಅದು ಒಂದನೆಯ ಮಹಾಯುದ್ಧದ ಅನಂತರದ ವ್ಯವಹಾರದ ಉಬ್ಬರದ ಕಾಲ. ಆಗ ತಕ್ಕಮಟ್ಟಿಗೆ ಪ್ರವರ್ಧಮಾನಕ್ಕೆ ಬಂದ ಬಿರ್ಲಾ ಉದ್ಯಮಗಳ ಬೆಳವಣಿಗೆ 1928ರ ವೇಳೆಗೆ ವ್ಯಾಪಕವಾದ ಆರ್ಥಿಕ ಮುಗ್ಗಟ್ಟಿನಿಂದ ಕುಂಠಿತವಾಯಿತು. ಆದರೆ ಬಿರ್ಲಾ ಹಿಂದೆಗೆಯಲಿಲ್ಲ. ಭಾರತದ ಸಕ್ಕರೆ ಕೈಗಾರಿಕೆಗೆ ಸರ್ಕಾರ ಸುಂಕದ ಸಂರಕ್ಷಣೆ ನೀಡಿದಾಗ ಬಿರ್ಲಾ ಅದರ ಪ್ರಯೋಜನ ಪಡೆದುಕೊಂಡು ಮೂರು ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಿದರು. ಎರಡನೆಯ ಮಹಾಯುದ್ಧ ಆರಂಭವಾಗುವ ವೇಳೆಗೆ ಬಿರ್ಲಾ ಸೋದರರು 4 ಕೋಟಿ ರೂಪಾಯಿ ಮೌಲ್ಯದ ನಾನಾ ಆಸ್ತಿಗಳ ಒಡೆಯರಾಗಿದ್ದರು. ಯುದ್ಧಾನಂತರ ಕಾಲದಲ್ಲಿ ಅವರ ಉದ್ಯಮಗಳು ವೇಗವಾಗಿ ಬೆಳೆದುವು. ನಾನಾ ಕ್ಷೇತ್ರಗಳಲ್ಲಿ ಕವಲೊಡೆದುವು. ಇಂದು ಅವರ ಕುಟುಂಬ ಅಲ್ಯೂಮಿನಿಯಮ್, ರಸಗೊಬ್ಬರ, ಸಿಮೆಂಟ್, ಭಾರಿ ಯಂತ್ರೋಪಕರಣ, ವಿದ್ಯುತ್ತು, ಕೃತಕ ತಂತು, ಎಲೆಕ್ಟ್ರಾನಿಕ್ಸ್ ಮುಂತಾದ ಹಲವಾರು ಉದ್ಯಮಗಳಲ್ಲಿ ಬಂಡವಾಳ ತೊಡಗಿಸಿದೆ. ಬಿರ್ಲಾ ಗುಂಪಿನ ಉದ್ಯಮಗಳ ಒಟ್ಟು ಆಸ್ತಿ ಸುಮಾರು ರೂ 1,692 ಕೋಟಿ ಎಂದು ಅಂದಾಜು ಮಾಡಲಾಗಿದೆ (1983). ಅವುಗಳ ಷೇರುದಾರರ ಸಂಖ್ಯೆ ಸುಮಾರು 2,50,000. ಅವುಗಳಲ್ಲಿ ಒಟ್ಟು ಸುಮಾರು 3 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

	ಬಿರ್ಲಾ 1915ರಲ್ಲಿ ರಾಜಕಾರಣ ಪ್ರವೇಶ ಮಾಡಿ ಉಗ್ರಗಾಮಿಗಳೆನಿಸಿ ಪೋಲಿಸರ ಕಣ್ಣಿಗೆ ಬೀಳದೆ ಸುಮಾರು ಮೂರು ತಿಂಗಳ ಕಾಲ ಭೂಗತರಾಗಿದ್ದರು. ಆಗಲೇ ಅವರು ಗಾಂಧಿಯವರ ವ್ಯಕ್ತಿತ್ವಕ್ಕೆ ಮಾರುಹೋದದ್ದು. ಗಾಂಧಿಯವರ ಆರ್ಥಿಕ ವಿಚಾರಗಳನ್ನು ಅವರೆಂದೂ ಒಪ್ಪಲಿಲ್ಲ. ಅವೆಲ್ಲಾ ಶಿರೋಗಾಮಿ ಎಂದು ಭಾವಿಸಿದ್ದರು. ಆದರೆ ಗಾಂಧಿಯವರ ರಾಷ್ಟ್ರಾಭಿಮಾನವೂ ಧಾರ್ಮಿಕ ದೃಷ್ಟಿಯೂ ಅವರಿಗೆ ಒಪ್ಪಿಗೆಯಾಗಿದ್ದುವು. ಅವರಿಗೂ ಗಾಂಧಿಯವರಿಗೂ ಗಾಢ ಸ್ನೇಹ ಬೆಳೆಯಿತು. ಗಾಂಧಿಯವರನ್ನು ಅವರು ತಮ್ಮ ತಂದೆ ಎಂಬಂತೆ ಪ್ರೀತಿಸಿದರು. ಗೌರವಿಸಿದರು. ಗಾಂಧಿ ತೀರಿಕೊಂಡದ್ದು ಬಿರ್ಲಾ ಭವನದಲ್ಲೇ. 

	ಗಾಂಧಿಯವರಿಗೆ ನಾನಾ ಚಟುವಟಿಕೆಗಳಿಗೆ ಬಿರ್ಲಾ ಧಾರಾಳವಾಗಿ ದಾನ ಮಾಡಿದರು. ಭಾರತಕ್ಕೆ ಸಾತಂತ್ರ್ಯ ಪ್ರಾಪ್ತವಾಗುವ ತನಕದ ಅವಧಿಯಲ್ಲಿ ಕಾಂಗ್ರೆಸಿಗೂ ಗಾಂಧಿಗೂ ಬಿರ್ಲಾ ಸಂಸ್ಥೆಗಳು ಒಟ್ಟು ರೂ. 20 ಕೋಟಿ ದಾನ ಮಾಡಿದುವೆಂಬುದು ಒಂದು ಅಂದಾಜು. ಸ್ವತಂತ್ರ ಭಾರತ ಸರ್ಕಾರದಿಂದ ತಮ್ಮ ಉದ್ಯಮಗಳಿಗೆ ಸವಲತ್ತುಗಳನ್ನು ಗಳಿಸಿಕೊಳ್ಳಲು ಬಿರ್ಲಾ ತಮ್ಮ ಹಾಗೂ ಕಾಂಗ್ರೆಸಿನ ನಡುವಣ ಸಂಬಂಧದ ಉಪಯೋಗ ಪಡೆದುಕೊಂಡರೆಂಬ ಆಪಾದನೆಯೊಂದುಂಟು. ಆದರೆ ಪ್ರಧಾನಿ ನೆಹರೂ ಮತ್ತು ಬಿರ್ಲಾ ಇವರ ನಡುವೆ ಅಂಥ ಸ್ನೇಹವೇನೂ ಬೆಳೆಯಲಿಲ್ಲವೆಂದು ಹೇಳಲಾಗಿದೆ.

	ಗಾಂಧಿ ಆರಂಭಿಸಿದ ಖಾದಿ ಮತ್ತು ಗ್ರಾಮ ಕೈಗಾರಿಕೆಗಳೂ ಅವರ ಇತರ ನಾನಾ ರಚನಾತ್ಮಕ ಕಾರ್ಯಗಳಿಗೂ ಹಣ ನೀಡುತ್ತಿದ್ದ ಬಿರ್ಲಾರ ರಾಷ್ಟ್ರೀಯ ಮುತ್ಸದ್ದಿತನ ಉತ್ಕøಷ್ಟವಾದ್ದಾಗಿತ್ತು. ಭಾರತದ ವೈಸರಾಯರೊಂದಿಗೂ ಅವರು ನಿಕಟ ಸಂಬಂಧ ಬೆಳೆಸಿದ್ದರು. ಕೇಂದ್ರ ವಿಧಾನಸಭೆಗೆ ಅವರು ಸದಸ್ಯರಾಗಿದ್ದರು. ನಾನಾ ಆರ್ಥಿಕ ರಾಜಕೀಯ ವಿಚಾರಗಳ ಬಗ್ಗೆ ಪಾಂಡಿತ್ಯಪೂರ್ಣ ಉಪನ್ಯಾಸ ನೀಡಬಲ್ಲವರಾಗಿದ್ದರು. ನವದೆಹಲಿಯಲ್ಲಿ ಭಾರತದ ವಾಣಿಜ್ಯ ಸಂಸ್ಥೆಗಳ ಒಕ್ಕೂಟವನ್ನು ಹಾಗೂ ಕಲ್ಕತ್ತೆಯಲ್ಲಿ ಭಾರತೀಯ ವಾಣಿಜ್ಯ ಸಂಸ್ಥೆಯನ್ನು ಸ್ಥಾಪಿಸಿದರು.

	ರಾಷ್ಟ್ರಾಭಿಮಾನಿಯಾಗಿದ್ದ ಬಿರ್ಲಾ ನಿರ್ಭೀತ ದೃಷ್ಟಿಯುಳ್ಳವರೂ ಆಗಿದ್ದರು. ಗಾಂಧಿ ಹಾಗೂ ವೈಸ್‍ರಾಯರ ನಡುವೆ ಅನೇಕ ವೇಳೆ ಸಂಧಾನ ನಿರತರಾಗಿದ್ದ ಬಿರ್ಲಾರನ್ನು ಎರಡೂ ಪಕ್ಷದವರು ಸಂಶಯ ದೃಷ್ಟಿಯಿಂದ ಕಾಣುತ್ತಿದ್ದುದುಂಟು. ಗಾಂಧಿಯವರ ಕಾಂಗ್ರೆಸಿನೊಂದಿಗೆ ಬಿರ್ಲಾ ನಿಕಟವಾಗಿ ವರ್ತಿಸುತ್ತಿದ್ದಾರೆಂದು ವೈಸ್‍ರಾಯ್ ಲಾರ್ಡ್ ಲಿನ್‍ಲಿತ್‍ಗೋ ಒಮ್ಮೆ ಅಸಮಾಧಾನ ವ್ಯಕ್ತಪಡಿಸಿದಾಗ ಬಿರ್ಲಾ ಅದನ್ನು ಸಹಿಸಲೊಲ್ಲದೆ ವೈಸರಾಯರೊಂದಿಗೆ ತಮ್ಮ ಸಂಬಂಧವನ್ನೇ ಕಡಿದುಕೊಂಡಿದ್ದರು. 

	ಬಿರ್ಲಾ ವ್ಯಕ್ತಿತ್ವ ಬಲು ಸಂಕೀರ್ಣವಾದ್ದು. ಐಶ್ವರ್ಯ ಸಂಪಾದನೆ ಮಾಡುವುದು ಉದ್ಯಮಿಯ ಕರ್ಮ, ಸಮಾಜ ಕಲ್ಯಾಣಕ್ಕಾಗಿ ಅದನ್ನು ತೊಡಗಿಸುವುದು ಅವನ ಧರ್ಮ ಎಂದು ಅವರು ಹೇಳುತ್ತಿದ್ದರು. ಖಾಸಗಿ ಉದ್ಯಮದಲ್ಲಿ ಅವರಿಗೆ ವಿಶೇಷವಾದ ನಂಬಿಕೆ. ಎರಡನೆಯ ಮಹಾಯುದ್ಧ ಕಾಲದಲ್ಲಿ ಹಲವು ಉದ್ಯಮಿಗಳೊಂದಿಗೆ ಸೇರಿ, ಸ್ವತಂತ್ರ ಭಾರತದ ಅಭಿವೃದ್ಧಿಗಾಗಿ ರಾಷ್ಟ್ರೀಯ ಯೋಜನೆಯನ್ನು ರಚಿಸಿದ ಬಿರ್ಲಾ ಅವರು ತಮ್ಮ ಉದ್ಯಮಗಳ ಆಧುನೀಕರಣಕ್ಕಾಗಿ ಸದಾ ಶ್ರಮಿಸುತ್ತಿದ್ದರು. ಹಲವಾರು ದೇವಾಲಯಗಳನ್ನೂ ಶಿಕ್ಷಣ ಸಂಸ್ಥೆಗಳನ್ನೂ ನಿರ್ಮಿಸಿದರು. ರಾಜಸ್ಥಾನದ ಪಿಲಾನಿಯಲ್ಲಿ ಅವರು ಸ್ಥಾಪಿಸಿದ ತಾಂತ್ರಿಕ ಶಿಕ್ಷಣ ಸಂಸ್ಥೆ ಪ್ರಸಿದ್ಧವಾಗಿದೆ. ಅವರು ಕಲ್ಕತ್ತೆಯ ಭಾರತೀಯ ವಾಣಿಜ್ಯ ಸಂಸ್ಥೆಗೆ 1924ರಲ್ಲೂ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಒಕ್ಕೂಟಕ್ಕೆ 1929ರಲ್ಲೂ ಅಧ್ಯಕ್ಷರಾಗಿದ್ದರು. 1957ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್ ಪ್ರಶಸ್ತಿಯನ್ನೂ ಪಡೆದಿದ್ದರು. 1983ರಲ್ಲಿ ಲಂಡನ್ನಿನಲ್ಲಿ ಕಾಲವಾದರು. 					
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ